Home ನಮ್ಮ ಕರಾವಳಿ ಬಂಟ್ವಾಳ ಪುರಸಭೆ ಅಧಿಕಾರ ಯಾರಿಗೆ? ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ತಂತ್ರ-ಪ್ರತಿತಂತ್ರ: ಎಸ್.ಡಿ.ಪಿ.ಐ. ಪಾತ್ರ...

ಬಂಟ್ವಾಳ ಪುರಸಭೆ ಅಧಿಕಾರ ಯಾರಿಗೆ? ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ತಂತ್ರ-ಪ್ರತಿತಂತ್ರ: ಎಸ್.ಡಿ.ಪಿ.ಐ. ಪಾತ್ರ ನಿರ್ಣಾಯಕ

ಬಂಟ್ವಾಳ: ಕೊನೆಗೂ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು ಪುರಸಭೆಯ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯತಂತ್ರವನ್ನು ಆರಂಭಿಸಿದೆ. ಆದರೆ ಇಲ್ಲಿ ಯಾರು ಅಧಿಕಾರ ಹಿಡಿಯುವುದಾದರೂ ಮೂರನೇ ಪಕ್ಷವಾದ ಎಸ್.ಡಿ.ಪಿ‌.ಐ. ಪಾತ್ರ ನಿರ್ಣಾಯಕವಾಗಿದೆ‌. ಪುರಸಭೆಯ ಅಧ್ಯಕ್ಷ ಸ್ಥಾ‌ನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲ 27 ಸದಸ್ಯರೂ ಅರ್ಹರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹಿಂದುಳಿದ ವರ್ಗ ಬಿ ಗೆ ಸೇರಿದ ಮಹಿಳಾ ಸದಸ್ಯರು ಇದ್ದಾರೆ. ಎಸ್.ಡಿ.ಪಿ.ಐ.ಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಸದಸ್ಯರೂ ಅರ್ಹರಿಲ್ಲ. ಹೀಗಾಗಿ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕುತೂಹಲಕಾರಿ ಮಾರ್ಪಟ್ಟಿದೆ.

- Advertisement -

ಪುರಸಭೆಗೆ 2018ರಲ್ಲಿ ಚುನಾವಣೆ ನಡೆದಿದ್ದು ಒಂದು ಬಾರಿ ಮೀಸಲಾತಿ ಪ್ರಕಟಗೊಂಡಿತ್ತು. ಆದರೆ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬಗೊಂಡಿತು. ಇದೀಗ ಮತ್ತೆ ಮೀಸಲಾತಿ ಘೋಷಣೆಯಾಗಿದ್ದು ಆದಷ್ಟು ಬೇಗ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸರಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

- Advertisement -

ಪುರಸಭೆಯ ಒಟ್ಟು 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿವೆ. ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಲೋಕಸಭೆ ಮತ್ತು ವಿಧಾನಸಭೆಯ ಸದಸ್ಯರ ಮತ ಸೇರುತ್ತದೆ. ಹೀಗಾಗಿ ಒಟ್ಟು 29 ಮಂದಿ ಮತದಾನದ ಹಕ್ಕನ್ನು ಹೊಂದಿದ್ದು ಬಹುಮತಕ್ಕೆ 15 ಮತಗಳು ಅಗತ್ಯವಾಗಿದೆ.

- Advertisement -

ಲೋಕಸಭೆ ಮತ್ತು ವಿಧಾನಸಭೆಯ ಸದಸ್ಯರು ಬಿಜೆಪಿ ಆಗಿರುವುದರಿಂದ ಪುರಸಭೆಯಲ್ಲಿ ಬಿಜೆಪಿಯ ಬಲ 13ಕ್ಕೆ ಏರಲಿದೆ. ಹೀಗಾಗಿ ಬಂಟ್ವಾಳ ಪುರಸಭೆಯಲ್ಲಿ ಪ್ರಸಕ್ತ ಬಿಜೆಪಿ ಬಹುಮತವನ್ನು ಹೊಂದಿದೆ. ಆದರೆ ಕೊನೆ ಗಳಿಗೆಯಲ್ಲಿ ಬಂಡಾಯ, ಮೈತ್ರಿ, ಅಡ್ಡ ಮತದಾನ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ನಡೆಯುತ್ತಿದೆ.

ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ ಎಸ್.ಡಿ.ಪಿ.ಐ. ಬಳಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಸದಸ್ಯರಿಲ್ಲ. 12 ಸ್ಥಾನವನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಎಸ್.ಡಿ‌.ಪಿ.ಐ.ಗೆ ಬಿಟ್ಟು ಕೊಡುವುದು ಕಷ್ಟ. ಹೀಗಾಗಿ ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿ ಸುಲಭವಾಗಿ ಗದ್ದುಗೆ ಏರಲಿದೆ.

ಒಂದು ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಇಟ್ಟುಕೊಂಡು ಅಭಿವೃದ್ಧಿಯಲ್ಲಿ ಸಿಂಹಪಾಲು ಒಪ್ಪಂದದ ಮೂಲಕ ಕಾಂಗ್ರೆಸ್ ಎಸ್.ಡಿ.ಪಿ.ಐ.ಯ ಬೆಂಬಲ ಪಡೆಯುವಲ್ಲಿ ಯಶಸ್ವಿ ಆದರೆ ಬಿಜೆಪಿ ವಿರೋಧ ಪಕ್ಷವಾಗಿ ಉಳಿಯಲಿದೆ. ಆದರೆ ಮಾಜಿ ಸಚಿವ ರಮಾನಾಥ ರೈ ಈ ಹಿಂದಿನಿಂದಲೂ ಬಂಟ್ವಾಳ ಪುರಸಭೆಯಲ್ಲಿ ಎಸ್.ಡಿ.ಪಿ.ಐ. ಜೊತೆ ಮೈತ್ರಿ ಮಾಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದು ಅವರ ಮುಂದಿನ ನಡೆ ಕಾದು ನೋಡಬೇಕಿದೆ.

ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬಂತೆ ಗದ್ದುಗೆಗೆ ಏರಲು ಕೊನೆ ಗಳಿಗೆಯಲ್ಲಿ ಯಾವ ರೀತಿಯ ಕಸರತ್ತು ನಡೆಯಬಹುದು.‌ ಬಹುಮತಕ್ಕೆ ಅಗತ್ಯವಿರುವ ಮತವನ್ನು ಭರ್ತಿ ಮಾಡಲು ಇತರ ಪಕ್ಷದ ಸದಸ್ಯರನ್ನು ಖರೀದಿಸುವ ಅಥವಾ ಮೈತ್ರಿ ಮಾಡುವ ಕೆಲಸಗಳೂ ನಡೆಯಬಹುದು.‌


ಎರಡು ವರ್ಷ ಬೋನಸ್:
ಬಂಟ್ವಾಳ ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಮೀಸಲಾತಿ ತಕರಾರಿನಿಂದ ಇನ್ನೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆಗಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ಸದಸ್ಯರ ಮೊದಲ ಮಾಸಿಕ ಸಭೆ ನಡೆದ ದಿನಾಂಕದಿಂದ ಮುಂದಿನ ಐದು ವರ್ಷಗಳ ವರೆಗೆ ಅಧಿಕಾರ ಅವಧಿ ಇರಲಿದೆ. ಹೀಗಾಗಿ ಶೀಘ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದರೆ ಪುರಸಭೆಯ ಹಾಲಿ ಸದಸ್ಯರು ಆಯ್ಕೆಯಾಗಿ ಏಳು ವರ್ಷ ಅಧಿಕಾರಿದಲ್ಲಿ ಇರಲಿದ್ದು ಎರಡು ವರ್ಷ ಬೋನಸ್ ಆಗಲಿದೆ.

ವಿವಿಧ ಪಕ್ಷದ ಮುಖಂಡರು ಹೇಳುದ್ದೇನು?
ಸಂಸದ, ಶಾಸಕ ಸೇರಿ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಒಂದು ವೇಳೆ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. ಮೈತ್ರಿ ಮಾಡಿದರೆ ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಚುನಾವಣೆಗೆ ದಿನಾಂಕ ಪ್ರಕಟವಾದ ಬಳಿಕ ಪಕ್ಷದ ಸಭೆ ಕರೆದು ಅಭ್ಯರ್ಥಿಗಳ ಆಯ್ಕೆ ಸಹಿತ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು: ದೇವದಾಸ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಭಾರಿ

ಎಸ್.ಡಿ.ಪಿ.ಐ.ಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಬೇಕಾದ ಸದಸ್ಯರಿಲ್ಲ. ಅಧ್ಯಕ್ಷ ಸ್ಥಾನ ಎಸ್.ಡಿ.ಪಿ.ಐ.ಗೆ ನೀಡಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಗೆ ಬೆಂಬಲ ನೀಡಲಾಗುವುದು. ಇಲ್ಲದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಎಸ್.ಡಿ.ಪಿ.ಐ. ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಆದ ಬಳಿಕ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಶಾಹುಲ್ ಹಮೀದ್ ಎಸ್.ಎಚ್., ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ


ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಯಾರ ಜೊತೆಯೂ ಮೈತ್ರಿ ಮಾಡುವುದಿಲ್ಲ. ಎರಡು ಸ್ಥಾನಕ್ಕೂ ಅರ್ಹರಾದ ಸದಸ್ಯರು ಕಾಂಗ್ರೆಸ್ ನಲ್ಲಿ ಇದ್ದು ಎರಡೂ ಸ್ಥಾನಕ್ಕೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಬಿ.ರಮಾನಾಥ ರೈ, ಮಾಜಿ ಸಚಿವ

- Advertisment -

Most Popular