Home ನಮ್ಮ ಕರಾವಳಿ ಬೇಕಲ್ ಉಸ್ತಾದ್ ಬೇಕಾಗಿತ್ತು; ಅವರಿಗಲ್ಲ, ಸಮುದಾಯಕ್ಕೆ…ಲೇಖನ: ಕೆ ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ

ಬೇಕಲ್ ಉಸ್ತಾದ್ ಬೇಕಾಗಿತ್ತು; ಅವರಿಗಲ್ಲ, ಸಮುದಾಯಕ್ಕೆ…ಲೇಖನ: ಕೆ ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ

- Advertisement -


- Advertisement -

ಶೈಖುನಾ ಬೇಕಲ್ ಉಸ್ತಾದ್ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದಾಗ, ಉಸ್ತಾದರ ಸಂದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿದ್ದುದರ ನಡುವೆಯೂ ಹಠ ಹಿಡಿದು ಅವಕಾಶ ಪಡೆಯದೆ ಹೋಗಿದ್ದರೆ…!? ನಾನಿಂದು ಅತೀವ ದುಃಖದ ಮಧ್ಯೆಯೂ ತುಸು ಸಮಾಧಾನ ಪಡಲು ಆ ನೆನಪು ನನಗೆ ಸಾಕು. ನನ್ನ ಪಾಲಿಗದು ಐತಿಹಾಸಿಕ ದಿನವಾಗಿತ್ತು.

- Advertisement -

ಆಸ್ಪತ್ರೆಯ ರೂಮಿಗೆ ಪ್ರವೇಶಿಸಿ ಸಲಾಂ ಹೇಳುತ್ತಲೇ ಉಸ್ತಾದ್ ತಮಾಷೆಯೊಂದಿಗೆ ಮಾತು ಆರಂಭಿಸಿದ್ದರು. ಆ ಕ್ಷಣಕ್ಕೆ ನನ್ನಲ್ಲಿ ಮನೆಮಾಡಿದ್ದ ತಲ್ಲಣಗಳೆಲ್ಲ ತಣ್ಣಗಾಗಿದ್ದವು. ಇಪ್ಪತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಮಾತನಾಡಿದೆವು. ಅಲ್ಲಿ ಎಂದಿನಂತೆ ಹೃದಯ ತುಂಬುವ ನಗುವಿತ್ತು. ತಿಳಿಹಾಸ್ಯದ ತಮಾಷೆ ಇತ್ತು. ಬೆನ್ನುತಟ್ಟುವ ಪ್ರಶಂಸೆ ಇತ್ತು. ತಿದ್ದಿ ತೀಡುವ ಉಪದೇಶವಿತ್ತು. ರೋಗಿಯೊಬ್ಬರ ಮುಂದೆ ನಿಂತಿದ್ದೇನೆಂಬ ಪ್ರಜ್ಞೆ ಮೂಡುವ ವಾತಾವರಣವೇ ಇರಲಿಲ್ಲ. ಹೆಚ್ಚು ಮಾತನಾಡಿದರೆ ಉಸ್ತಾದರಿಗೆ ಕಷ್ಟವಾದೀತು ಎಂದು ನಾನೇ ನೆನಪಿಸಿದೆ. “ನನಗೇನೂ ಕಷ್ಟವಿಲ್ಲ. ನಿನಗೇ ಸಮಯವಿರಲಿಕ್ಕಿಲ್ಲ ಅಷ್ಟೇ. ನಮ್ಮ ಇಷ್ಟದವರ ಜೊತೆ ಮಾತನಾಡುವುದೆಂದರೆ ಇಷ್ಟವೇ” ಎಂದರು. ಮನದೊಳಗೊಂದು ಕೋಡು ಮೂಡಿದಂತಾಗಿ, ಇಷ್ಟದವರ ಪಟ್ಟಿಯಲ್ಲಿ ನಾನೂ ಇದ್ದೇನೆಯೇ ಎಂದು ಕೇಳಿ ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದೆ. ಹೌದೆಂಬಂತೆ ಕೆಲವು ಮಾತುಗಳನ್ನಾಡಿದರು. ಕರ್ನಾಟಕ ಯಾತ್ರೆಯ ಮೈಸೂರು ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಒಂದೆರಡು ಇಜಾಝತ್ ಗಳನ್ನು ನೀಡಿದರು. ಪ್ರತಿಯೊಂದೂ ಆತ್ಮ ವಿಶ್ವಾಸ ತುಂಬುವ ಮಾತುಗಳಾಗಿದ್ದವು. ‘ನನಗೇನೂ ಸಮಸ್ಯೆ ಇಲ್ಲ’ ಎನ್ನುವಾಗ ಅವರೊಳಗಿದ್ದ ಆತ್ಮಸ್ಥೈರ್ಯ ಎದ್ದುಕಾಣುತ್ತಿತ್ತು. “ನಾನು ಇನ್ನೂ ಸ್ವಲ್ಪ ಕಾಲ ಬದುಕಬೇಕು. ಸುನ್ನತ್ ಜಮಾಅತ್ ಗಾಗಿ ಏನಾದರೂ ಮಾಡಬೇಕು. ಸರಿಯಾಗಿ ನಮಾಝ್ ಎಲ್ಲ ಮಾಡುವಂತಾದ ಬಳಿಕವೇ ಮರಣ ಹೊಂದಬೇಕು. ಈಗ ಎಲ್ಲ ಒಟ್ರಾಸಿಯಾಗಿದೆ” ಎನ್ನುವಾಗ ಸುನ್ನತ್ ಜಮಾಅತ್ ಬಗೆಗಿನ ಅವರ ಕಾಳಜಿ, ನಮಾಝ್ ಬಗೆಗಿನ ಆಸಕ್ತಿ ಎದ್ದು ಕಾಣುತ್ತಿತ್ತು.

ಸ್ವಲ್ಪ ಕಾಲವಲ್ಲ, ಉಸ್ತಾದ್ ಬಹುಕಾಲ ಬಾಳಬೇಕು. ಅದು ನಿಮಗಾಗಿ ಅಲ್ಲ, ಸಮಾಜದ ಅಗತ್ಯಕ್ಕಾಗಿ ಅಂದೆ. ಇಲ್ಲದಿದ್ದರೂ ಅವರಿಗೆ ಅದರ ಅಗತ್ಯವೇನೂ ಇರಲಿಲ್ಲ. ಅವರಿಗೆ ಬೇಕಾದುದನ್ನೆಲ್ಲಾ ಅವರು ಅದಾಗಲೇ ಮಾಡಿಟ್ಟಿದ್ದಾರೆ. ಬರೋಬ್ಬರಿ 50 ವರ್ಷಗಳಿಂದ ದರ್ಸ್ ನಡೆಸುತ್ತಾ ದಶ ಸಹಸ್ರ ಸಂಖ್ಯೆಯಲ್ಲಿ ಉಲಮಾಗಳನ್ನು ರೂಪಿಸಿದ್ದಾರೆ. ಅವರ ಶಿಷ್ಯಂದಿರು, ಶಿಷ್ಯರ ಶಿಷ್ಯಂದಿರಾದಿಯಾಗಿ ಅವರ ಜ್ಞಾನದಿಂದ ಪಾಲು ಪಡೆದವರ ಪರಂಪರೆ ಬಹಳ ದೊಡ್ಡದಿದೆ. ಆ ಜ್ಞಾನ ಸಾಗರದಿಂದ ಪ್ರಯೋಜನ ಪಡೆದ ಸಾರ್ವಜನಿಕರ ಸಂಖ್ಯೆ ಕೂಡ ಹೇಳ ತೀರದು. ಅವರ ಕಾರಣದಿಂದ ಯಾರೇ ಸತ್ಕರ್ಮಗೈದರೂ ಅದರ ಪುಣ್ಯದಲ್ಲಿ ಒಂದು ಪಾಲು ಅವರಿಗೂ ಸಲ್ಲುತ್ತದೆ ಎಂದ ಮೇಲೆ ಅವರ ಪುಣ್ಯಗಳ ಶೇಖರಣೆ ಎಷ್ಟಿರಬಹುದು!
ಅವರ ಅಗತ್ಯವಿರುವುದು ಅವರಿಗಲ್ಲ, ನಮಗೆ, ಈ ಸಮಾಜಕ್ಕೆ. ಅವರ ಧರ್ಮಜ್ಞಾನವನ್ನು ಸರಿಗಟ್ಟುವ ವಿದ್ವಾಂಸನೊಬ್ಬ ಈ ನಾಡಿನಲ್ಲಿಲ್ಲ ಎನ್ನುವುದನ್ನು ಬೆಂಬಲಿಗರು ಬಿಡಿ, ವಿರೋಧಿಗಳೂ ಒಪ್ಪುವುದಕ್ಕೆ ರೆಡಿ.
ಕರ್ಮಶಾಸ್ತ್ರದಲ್ಲಷ್ಟೇ ಅಲ್ಲ, ಎಲ್ಲ ಜ್ಞಾನ ಪ್ರಕಾರಗಳಲ್ಲೂ. ಸೈದ್ಧಾಂತಿಕವಾಗಿ ವಿರೋಧವಿರುವವರು, ಸಂಘಟನಾತ್ಮಕವಾಗಿ ಭಿನ್ನತೆ ಇರುವವರು ಕೂಡ ಅವರ ಬಳಿ ಸಂದೇಹ ನಿವಾರಣೆಗೆ, ಸಮಸ್ಯೆ ಪರಿಹಾರಕ್ಕೆ ಬರುತ್ತಾರೆ ಎಂದರೆ
ಅದು ಅವರ ಪ್ರಕಾಂಡ ಪಾಂಡಿತ್ಯಕ್ಕೆ ಸಾಕ್ಷಿ ಅಷ್ಟೇ ಅಲ್ಲ, ಭಿನ್ನತೆಗಳಿಗೆ ಅತೀತವಾದ ನ್ಯಾಯ ಪಕ್ಷಪಾತಿತ್ವಕ್ಕೂ ನಿದರ್ಶನ. ಇದ್ದದ್ದನ್ನು ಇದ್ದಂತೆ ನಿರ್ಭೀತವಾಗಿ ಹೇಳುವ ನ್ಯಾಯ ನಿಷ್ಠೆಗೆ ಸಾಕ್ಷಿ. ಯಾವುದೇ ಧಾರ್ಮಿಕ ಸಮಸ್ಯೆ ಇರಲಿ, ಪರಿಹಾರಕ್ಕಾಗಿ ಯಾರಲ್ಲಿ ಕೇಳೋಣ ಎಂಬ ಪ್ರಶ್ನೆ ಎದುರಾದಾಗ ಮೊದಲು ಬರುವ ಹೆಸರು ಬೇಕಲ್ ಉಸ್ತಾದ್. ಕರ್ಮಶಾಸ್ತ್ರದ ಎಂತಹ ಕಗ್ಗಂಟಾದರೂ, ಯಾವ ಮದ್ಸ್ ಹಬ್ ಗೆ ಸಂಬಂಧಿಸಿದ್ದಾದರೂ ಸುಲಲಿತವಾಗಿ ಬಿಡಿಸಬಲ್ಲ ಅವರ ವಿದ್ವಪ್ರತಿಭೆ ಅಸಾಮಾನ್ಯವಾದುದು.

ಇಲ್ಮ್ ನ ಹರಿವು ಕೇರಳದಿಂದ ಕರ್ನಾಟಕಕ್ಕೆ ಎನ್ನುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಸಂಗತಿ. ಈ ಹರಿವಿನ ದಿಕ್ಕನ್ನು ಉಲ್ಟಾ ಮಾಡಿದ ಹಿರಿಮೆ ಉಸ್ತಾದರಿಗೆ ಸಲ್ಲುತ್ತದೆ. ನಾಲ್ಕು ದಶಕಗಳ ಹಿಂದೆ ಕನ್ನಡಿಗರಾಗಿದ್ದ ಮರ್ಹೂಂ ಪರ್ಯಕ್ಕಳ ಅಹ್ಮದ್ ಮುಸ್ಲಿಯಾರ್ ಎಂಬ ಮಹಾನ್ ವಿದ್ವಾಂಸ ಕೇರಳಕ್ಕೆ ವಾಸ್ತವ್ಯ ಬದಲಿಸಿ ‘ಕುಂಬೋಲ್ ಉಸ್ತಾದ್’ ಆದ ಮೇಲೆ ಸಮಸ್ತ ಕೇರಳ ಜಂಇಯತುಲ್ ಉಲಮಾ ಕೇಂದ್ರ ಮುಶಾವರದ ಸದಸ್ಯರಾಗಿದ್ದರು. ಆ ಬಳಿಕ ಪ್ರಸ್ತುತ ಸ್ಥಾನವನ್ನು ಅಲಂಕರಿಸಿದ ಮೊದಲ ಕನ್ನಡಿಗ ಬೇಕಲ್ ಉಸ್ತಾದ್.
ಜಾಮಿಯಾ ಸಅದಿಯಾ ಸಂಸ್ಥೆಯ ಪ್ರಾಚಾರ್ಯರಾಗುವ ಮೂಲಕ ಕೇರಳದ ಸಂಸ್ಥೆಯೊಂದರ ಸಾರಥ್ಯ ವಹಿಸಿದ ಮೊದಲ ಕನ್ನಡಿಗ ಕೂಡ ಅವರಾದರು. ಹಾಗೆ ನೋಡಿದರೆ ನಮ್ಮ ತಿಳುವಳಿಕೆ ಪ್ರಕಾರ ಶಾಫಿ ವಲಯದಲ್ಲಿ ಖಾಝಿ ಸ್ಥಾನ ವಹಿಸಿದ ಮೊದಲ ಕನ್ನಡಿಗ ಕೂಡ ಅವರೆ.

ಉನ್ನತ ಉಲಮಾಗಳೆಲ್ಲ ಸೇರಿ ಅವರನ್ನು ‘ತಾಜುಲ್ ಫುಖಹಾ’ ಎಂದು ಗೌರವಿಸಿದ್ದು ಬಹಳ ಅರ್ಥಪೂರ್ಣವಾಗಿದೆ. ‘ಕರ್ಮಶಾಸ್ತ್ರ ಪಂಡಿತರ ಕಿರೀಟ’ ಎನ್ನುವುದಕ್ಕಿಂತ ಅನ್ವರ್ಥವಾಗುವ ಹೆಸರು ಅವರ ಮಟ್ಟಿಗೆ ಬೇರೇನಿದೆ? ಜೊತೆಗೆ ಇಬ್ಬರು ‘ತಾಜ್’ಗಳ ಶಿಷ್ಯ ಕೂಡ- ತಾಜುಲ್ ಉಲಮಾ ಮತ್ತು ತಾಜುಶ್ಶರೀಅ.

ಬೇಕಲ್ ಉಸ್ತಾದ್ ಅನಾರೋಗ್ಯ ಪೀಡಿತರಾಗಿದ್ದಾರೆ ಎಂಬ ಸುದ್ದಿ ಕೇಳಿದಾಗ ಆಘಾತಕ್ಕೀಡಾಗದವರಿಲ್ಲ. ಮಾಣಿ ಉಸ್ತಾದ್ ರಂತಹ ಹಿರಿಯರೇ ಚಿಂತೆಗೆ ಬಿದ್ದು ಮಾತನಾಡಿದ್ದನ್ನು ಕೇಳಿದ್ದೇನೆ. ಜ್ಞಾನಿಗೆ ತಾನೆ ಜ್ಞಾನಿಯ ಬೆಲೆ ಗೊತ್ತು? ತಾಜುಲ್ ಉಲಮಾರ ವಿದಾಯ ಆಘಾತಕರವಾಗಿತ್ತು, ನಿಜ. ಆದರೆ ಅವರು ತಾಜುಲ್ ಫುಖಹಾ ಅಂತಹವರನ್ನು ಕೊಟ್ಟು ಹೋಗಿದ್ದರು. ತಾಜುಲ್ ಫುಖಹಾರ ಸ್ಥಾನ ತುಂಬಲು ಯಾರಿದ್ದಾರೆ ಇಲ್ಲಿ? ಎಂಬ ಹಿರಿಯ ಉಸ್ತಾದರೊಬ್ಬರ ಪ್ರಶ್ನೆ ಚಿಂತನಾರ್ಹವಾಗಿದೆ; ಚಿಂತಾಜನಕವಾಗಿದೆ.

ಬೇಕಲ್ ಉಸ್ತಾದ್ ಚೇತರಿಕೆಯ ಹಾದಿಯಲ್ಲಿದ್ದಾರೆ; ಇನ್ಶಾ ಅಲ್ಲಾಹ್, ಅವರು ಮತ್ತೆ ಧರ್ಮಸೇವೆಯ ಅಖಾಡಕ್ಕೆ
ಮರಳಲಿದ್ದಾರೆ ಎಂದೇ ನಂಬಿದ್ದೆವು. ಅವರೇ ತುಂಬಿಕೊಟ್ಟಿದ್ದ ಆತ್ಮ ವಿಶ್ವಾಸವನ್ನು ಮುರಿದು ಇಂದು ಅಲ್ಲಾಹನ ವಿಧಿಗೆ ಓಗೊಟ್ಟಿದ್ದಾರೆ. ಒಪ್ಪದೆ ವಿಧಿಯಿಲ್ಲ.
ಬೇರೆಯವರು ಹೇಳೋಣ! ಸಮುದಾಯವನ್ನು ಅಲ್ಲಾಹು ಸಲಾಮತ್ ಮಾಡಲಿ, ಆಮೀನ್.

- Advertisment -

Most Popular