Home ನಮ್ಮ ರಾಜ್ಯ ಕೋವಿಡ್ ಸೋಂಕು ಎಫೆಕ್ಟ್: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

ಕೋವಿಡ್ ಸೋಂಕು ಎಫೆಕ್ಟ್: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

ಬೆಂಗಳೂರು: ಕೋವಿಡ್ 19 ಸೋಂಕು ಪ್ರಕರಣ ಎಲ್ಲೆಡೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸೋಮವಾರ(ಮಾರ್ಚ್ 150 ತಿಳಿಸಿದೆ.

ಈ ಮೊದಲು ಮಾರ್ಚ್ 24ರಿಂದ 31ರವರೆಗೆ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ದಿನಾಂಕ ಘೋಷಿಸಲಾಗಿತ್ತು. ಚಲನಚಿತ್ರೋತ್ಸವಕ್ಕಾಗಿ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿತ್ತು.

ಏತನ್ಮಧ್ಯೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಗೆ ಚಲನಚಿತ್ರೋತ್ಸವ ಸಂಘಟಿಸುವ ಕುರಿತು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಅಕಾಡೆಮಿ ಪತ್ರ ಬರೆದಿದ್ದು, ಅವರ ಸೂಚನೆ ಅನ್ವಯ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲು ಸೂಚಿಸಿರುವುದಾಗಿ ತಿಳಿಸಿದೆ.

- Advertisement -

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅತಿಥಿಗಳು ಭಾಗವಹಿಸುವ ಸಂಭವವಿತ್ತು. ಆದರೆ ಕೆಲವು ದಿನಗಳಿಂದ ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಲೇ ಇದ್ದು, ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಚಲನಚಿತ್ರೋತ್ಸವವನ್ನು ಅನಿರ್ದಿಷ್ಟಾವಧಿವರೆಗೆ ಮುಂಡೂಡುವ ಬಗ್ಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಕೋವಿಡ್ ಸೋಂಕಿನ ಜಾಗತಿಕ ಪರಿಣಾಮ ಮತ್ತು ಎರಡನೇ ಅಲೆ ಕುರಿತು ಅವಲೋಕನ ಪ್ರತಿದಿನ ನಡೆಯುತ್ತಿದ್ದು, ತಜ್ಞರ ಸಲಹೆ ಪಡೆದುಕೊಂಡು ಶೀಘ್ರದಲ್ಲಿಯೇ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisment -

Most Popular