Home ಕಾನೂನು ಮಾಹಿತಿ ಸರಸ್ವತಿ ಕಾಮತ್ ಮೇಲೆ ಹಲ್ಲೆ ಪ್ರಕರಣ :ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ...

ಸರಸ್ವತಿ ಕಾಮತ್ ಮೇಲೆ ಹಲ್ಲೆ ಪ್ರಕರಣ :
ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಹದಿನೈದು ಮಂದಿಗೆ ಜೈಲು ಶಿಕ್ಷೆ

ಸುಳ್ಯ: ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಶ್ರೀಮತಿ ಸರಸ್ವತಿ ಕಾಮತ್ ಅವರ ಮೇಲೆ ಚುನಾವಣೆಯ ಸಂದರ್ಭದಲ್ಲಿ ಹಲ್ಲೆ ನಡೆಸಿ ಕೇಸಿಗೆ ಒಳಗಾಗಿದ್ದ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿಗೆ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆಯ ತೀರ್ಪು ನೀಡಿದೆ.

- Advertisement -

2013 ರ ಚುನಾವಣೆ ಸಂದರ್ಭ ಮರ್ಕಂಜದ ಕುದ್ಕುಳಿ ಎಂಬಲ್ಲಿ ಘಟನೆ ನಡೆದಿತ್ತು. ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ ಕಾಲಿನಿಂದ ತನ್ನ ಮರ್ಮಾಂಗಕ್ಕೆ ತುಳಿದು, ಸೀರೆಯನ್ನು ಎಳೆದಿದ್ದಾರೆಂದೂ, ಆ ವೇಳೆ ತನ್ನ ರಕ್ಷಣೆಗೆ ಬಂದ ಇಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರೆಂದೂ ಸರಸ್ವತಿ ಕಾಮತ್ ಪೋಲೀಸರಿಗೆ ದೂರು ನೀಡಿದ್ದರು.

- Advertisement -

ಈ ದೂರಿನ ತನಿಖೆ ನಡೆಸಿದ ಆಗಿನ ಎಸ್ಸೈ ರವಿ ಬಿ.ಎಸ್. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸುಳ್ಯ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ರವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆಯೆಂದು ಸೆಪ್ಟೆಂಬರ್ 6 ರಂದು ಸಂಜೆ ತೀರ್ಪು ನೀಡಿ, ಎಲ್ಲಾ ಹದಿನೈದು ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡನೆಯ ಘೋಷಣೆ ಮಾಡಿದರು.

- Advertisement -

ಭಾರತೀಯ ದಂಡ ಸಂಹಿತೆ 143 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಕಾರಾಗೃಹ ವಾಸ, ಸೆಕ್ಷನ್ 147 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಕಾರಾಗೃಹ ವಾಸ ಮತ್ತು 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ತಿಂಗಳ ಸೆರೆವಾಸ, ಸೆಕ್ಷನ್ 341 ರ ಅಪರಾಧಕ್ಕೆ ಹದಿನೈದು ದಿನಗಳ ಕಾರಾಗೃಹ ವಾಸ ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವಾರ ಜೈಲು, ಸೆಕ್ಷನ್ 504 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಕಾರಾಗೃಹವಾಸ, ಸೆಕ್ಷನ್ 506 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಕಾರಾಗೃಹವಾಸ, ಸೆಕ್ಷನ್ 354 ಜೊತೆಗೆ 149 ರ ಅಪರಾಧಕ್ಕೆ 2 ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದಲ್ಲದೆ ಎಲ್ಲಾ ಹದಿನೈದು ಮಂದಿ ಆರೋಪಿಗಳು ತಲಾ ರೂ. 3750 ರಂತೆ 50 ಸಾವಿರ ರೂ. ಪರಿಹಾರವನ್ನು ನೊಂದ ಮಹಿಳೆಗೆ ನೀಡಬೇಕೆಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಒಟ್ಟು 15 ಸಾಕ್ಷಿಗಳ ಲ್ಲಿ 13 ಮಂದಿ ಪ್ರಾಸಿಕ್ಯೂಶನ್ ಪರ ಸಾಕ್ಷಿ ನುಡಿದಿದ್ದಾರೆಂದು ಎ.ಪಿ.ಪಿ. ಜನಾರ್ಧನ ಬಿ ಯವರು ತಿಳಿಸಿದ್ದಾರೆ.

ತಕ್ಷಣವೇ ಆರೋಪಿಗಳ ಪರ ನ್ಯಾಯವಾದಿಯವರು ಆರೋಪಿಗಳಿಗೆ ಮೇಲಿನ ಕೋರ್ಟಿಗೆ ಹೋಗಲು ಒಂದು ತಿಂಗಳ ಕಾಲಾವಕಾಶ ಕೊಟ್ಟು ಇಂದೇ ಜಾಮೀನು ನೀಡಬೇಕೆಂದೂ ವಿನಂತಿಸಿಕೊಂಡರು.
ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಒಂದು ತಿಂಗಳ ಕಾಲಾವಕಾಶ ಮತ್ತು ಸ್ಥಳದಲ್ಲೇ ಜಾಮೀನು ನೀಡಿದರು.

- Advertisment -

Most Popular