Home ನಿಮ್ಮ ಅಂಕಣ ಕೊರೋನ ಮತ್ತು ಕ್ವಾರಂಟೈನ 17ದಿನಗಳು

ಕೊರೋನ ಮತ್ತು ಕ್ವಾರಂಟೈನ 17ದಿನಗಳು

ಲೇಖನ: ರಾಧಾಕೃಷ್ಣ ಎ
‘ರಾಮ್ದೇವ್’ ವಿಟ್ಲ
ದೇಶಕ್ಕೆ ಬಂದ ಮಹಾಮಾರಿಗೆ 2021ರ ಆಗಸ್ಟ್ ಕೊನೆಗೆ ಬರೋಬ್ಬರಿ 18 ತಿಂಗಳು. ವೈಜ್ಞಾನಿಕತೆಯಲ್ಲಿ ಅಗ್ರ ಸ್ಥಾನ ಪಡೆಯುವಲ್ಲಿ ನಾವೇನು ವಿಫಲರಲ್ಲ. ಆದರೂ ಕೊರೊನಕ್ಕೆ ಗುರಾಣಿ ಹಿಡಿದು ನಿರಾಳವಾಗಿ ಬದುಕುವ ಕಾಲ ಕೂಡಿ ಬಂದಿಲ್ಲ ಎನ್ನುವುದೇ ವಿಪರ್ಯಾಸ. ದೇಶದಲ್ಲಿ ವ್ಯವಹಾರ ಮರು ವ್ಯವಸ್ಥೆಗೆ ನಿಧಾನವಾಗಿ ಬರುತ್ತಿದೆ ಮತ್ತು ಇದಕ್ಕಾಗಿ ಸರಕಾರ ಹಗಲಿರುಳು ಹೆಣಗಾಡುತಿದೆ. ಸೂಕ್ಷ್ಮ ಕ್ರಿಮಿ ಶಾಲಾ ವ್ಯವಸ್ಥೆಯನ್ನು ಇಷ್ಟೊಂದು ದಿನಗಳ ಮಟ್ಟಿಗೆ ಮುಚ್ಚಿಸುತ್ತದೆಯೆಂದು ಯೋಚಿಸಿಯೇ ಇಲ್ಲ. ಇರಲಿ ಬದಲಿ ವ್ಯವಸ್ಥೆಗಳು ನಡೆಯುತ್ತಿದೆ.

- Advertisement -

ಎಲ್ಲೊ ಚೀನಾದಲ್ಲಿದೆ ಎಂದು ಆಡುತ್ತಿದ್ದುದು ನವೆಂಬರ್ 2019 ರಲ್ಲಿ. ಆದರೆ 2021ರಲ್ಲಿ ನಮ್ಮ ಮನೆಗೂ ಕಾಲಿಡುತ್ತದೆ ಎಂದು ಕನಸೂ ಕಂಡಿರಲಿಲ್ಲ. ಪರ-ಊರಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡೋದು, ಕೊರೋನ ಬಂದವರನ್ನು ಮುಚ್ಚಿಗೆ(safety kit)ಹಾಕಿಕೊಂಡು ಬಂದು ಆಂಬುಲೆನ್ಸ್ ನಲ್ಲಿ ಹಾಕಿ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಿ ಗುಣಮುಖರಾಗಿಸಿ ಮನೆಗೆ ಬಿಡುವುದು, ಅಸಾಧ್ಯವಾದರೆ ಹೆಣವಾಗಿ ಸ್ಮಶಾನದಲ್ಲಿ ಸೇವಾ ತಂಡದವರಿಂದ ಮಣ್ಣಾಗಿಸಿದ ಬೀಬತ್ಸ ದುರಂತ ಓದಿದ್ದೇವೆ, ಟಿವಿಯಲ್ಲಿ ಕಂಡಿದ್ದೇವೆ. ಕನಿಷ್ಠ ಈಗ ಅವೆಲ್ಲದರಿಂದ ಮುಕ್ತರಾಗಿದ್ದೇವೆ ಎನ್ನುವುದು ಸಮಾಧಾನಕರ. ಸರಕಾರ ಕೊರೋನ ಜಾಗರೂಕತೆಗಾಗಿ ಮಾಡಿರುವ ವ್ಯವಸ್ಥೆಯಂತೂ ಸೂಪರ್. ಕೊಟ್ಟಿರುವ ಮಾರ್ಗಸೂಚಿಗಳು ಪರಿಣಾಮಕಾರಿಯಾದವುಗಳೇ ಹೌದು.

- Advertisement -

ಆದರೆ ಕೊನೆಯ ರೋಗಿಗೆ ಆ ಸವಲತ್ತುಗಳು ತಲುಪುವಾಗ ಮಾತ್ರ ಕೆಲವೊಮ್ಮೆ ನಿಯಮಗಳು ಮಾತ್ರವಾಗಿರುವುದು ಖೇದಕರ. ಟ್ರೀಟ್ಮೆಂಟ್ ಮತ್ತು ನಿಯಮಗಳ ಹೊರೆ ರೋಗಿಗೆ ಶಿಕ್ಷೆಯಾಗಿಯೇ ಕೆಲವೊಂದು ಬಾರಿ ಪರಿಣಮಿಸುತ್ತಿದೆ. ಶೀತ, ಜ್ವರ ಎಲ್ಲಾ ಮನೆಗಳಲ್ಲೂ ಇದ್ದದ್ದೇ. ಅದೇ ಕೊರೊನವಾದರೂ ಅದೃಷ್ಟವಶಾತ್ ಮೌನವಾಗಿ ಮನೆಯಲ್ಲಿದ್ದು, ಪರಿಚಿತ ವೈದ್ಯರ ಔಷದಿ ಸೇವಿಸಿ ಗುಣಮುಖರಾದವರೂ ಇದ್ದಾರೆ. ಹಲವರು ಪ್ರಾಮಾಣಿಕರಾಗಿ ಟೆಸ್ಟ್ ಎಂದು ಮುಂದಡಿಯಿಟ್ಟು 14ದಿನ ಫುಲ್ ರೆಸ್ಟ್ ಮಾಡಿಕೊಂಡವರು ಇದ್ದಾರೆ. ಕೆಲಸ ಮಾಡಿದರೂ, ಇಲ್ಲದಿದ್ದರೂ ತಿಂಗಳ ಸಂಬಳ ಬರುವುದಿದ್ದರೆ ಬಚಾವ್, ಇಲ್ಲವಾದರೆ ಕಷ್ಟ.

- Advertisement -

ಈ ಬಗ್ಗೆ ನನ್ನ ಈ ಪ್ರಕರಣವನ್ನು ನಿಮಗೆ ವಿವರಿಸಲೇ ಬೇಕು.
ನನಗೂ ನನ್ನ ಮನೆಯವಳಿಗೂ ಹೊಟ್ಟೆ ಹೊರೆಯುವ ಖಾಸಗಿ ಕೆಲಸ, ಸಿಗುವುದು ಕಡಿತವಾದರೂ ಅದನ್ನು ಮನೆಯಲ್ಲಿದ್ದೆ ಪಡೆಯುವುದಕ್ಕೆ ಮನಸಿಲ್ಲದೆ ದಿನ ಕರ್ತವ್ಯಕ್ಕೆ ಹಾಜರಾಗುತ್ತಾ, ಮನೆಯ ಸಾಮಗ್ರಿ ಪೇಟೆಯಿಂದ ತರುವುದರಿಂದಲೋ, ಶರೀರದ ತಾಳಿಕೊಳ್ಳೋ ಶಕ್ತಿ ಕಡಿಮೆ ಆದದ್ದರಿಂದಲೋ ಶೀತ, ಜ್ವರ ಕಾಣಿಸಿಕೊಂಡಿತು. ಹೇಳುವಷ್ಟು ಗುಣಲಕ್ಷಣಗಳು ಇಲ್ಲವಾದ್ದರಿಂದ, ಕೊರೋನ ಸಂಕಷ್ಟದ ಸಮಯದಲ್ಲೂ ಎಷ್ಟೋ ರೋಗಿಗಳಿಗೆ ಕೊರೋನ ಎಚ್ಚರಿಕೆ ಸಹಿತ ತಪಾಸಣೆ ಮಾಡಿ ಧೈರ್ಯನೀಡಿ ಔಷದಿ ಕೊಡುವ ನನ್ನ ಆತ್ಮೀಯ ವೈದ್ಯರಿಂದ ಪಡೆದ ಮದ್ದಿನಿಂದ 5-6 ದಿನದೊಳಗೆ ಗುಣಮುಖನಾದೆ. ಬೇರೇನೂ ವಿಶೇಷ ಅನುಭವವಾಗಿಲ್ಲ. ಆ ಬಳಿಕ ನಮ್ಮ ಮನೆಯವರ ಸರದಿ, ನನ್ನೆರಡು ಮಕ್ಕಳಿಗೂ, ಪತ್ನಿಗೂ ಅದೇ ರೀತಿಯ ಸಮಸ್ಯೆಗಳು ಮತ್ತು ಔಷದಿಯು ನಡೆದು ಗುಣಮುಖರಾಗಿದ್ದರು.

ಜುಲೈ ಕೊನೆ ವಾರದಿಂದ ಆಗಸ್ಟ್ 15ರ ಸುಮಾರಿಗೆ ಎಲ್ಲವೂ ವಾಸ್ತವ ಸ್ಥಿತಿಗೆ ಬಂತು. ಆ ಮೇಲಿನ ದುರಂತಗಳೇ ನಮ್ಮ ಜೀವನದ ಕರಾಳ ದಿನಗಳು. ಮನಸ್ಸಿನ ತೃಪ್ತಿಗಾಗಿ, ಕೊರೋನ ಟೆಸ್ಟಿಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಸ್ಟ್ 16ಕ್ಕೆ ಹೋದೆ. ಸರತಿಯು ಬಹಳ ಉದ್ದವಾಗಿದ್ದದ್ದರಿಂದ ಬೇಡ ಎಂದು ಹೊರಬಂದೆ. ಗ್ರಹಚಾರ ಖುಲಾಯಿಸಿತು ಎನ್ನೋ ಹಾಗೆ ನನ್ನ ಮನೆಯಾಚೆಗಿನ ಆಶಾ ಕಾರ್ಯಕರ್ತೆ ನಿಮ್ಮ ಮನೆ ಕಡೆ ಟೆಸ್ಟ್ ಗೆ ಹೋಗ್ತಾ ಇದ್ದೇವೆ ಇಲ್ಲಿ ಯಾಕೆ ಕಾಯುವುದು ಅಂದುಬಿಟ್ಟರು. ಸರಿ ಎನ್ನುತ್ತಾ ಅಭಿಮಾನದಿಂದ ನಮ್ಮ ಮನೆಯಿಂದಲೇ ಆರಂಭಿಸಿ ಎಂದು ಟೆಸ್ಟ್ ಗೆ ಆಹ್ವಾನಿಸಿ 16.8.2021ರಂದು ಮನೆಯವರೆಲ್ಲರ swap ಟೆಸ್ಟ್ ಮಾಡಲಾಯಿತು. ಅದೇ ದಿನ ಸಂಜೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಂದ Antigen ರಿಪೋರ್ಟ್ನಲ್ಲಿ ಎಲ್ಲರದ್ದೂ ‘ನೆಗೆಟಿವ್ ‘ಎಂದು ಬಂತು ಸಮಾಧಾನವಾಯಿತು. ಶಾಕಿಂಗ್ ನ್ಯೂಸ್ ಎಂದರೆ 17.8.2021ರಂದು Wenlock ಆಸ್ಪತ್ರೆ ಯಿಂದ ಬಂಧ RT-PCR ಮೆಸೇಜ್ನಲ್ಲಿ ನನ್ನನ್ನುಳಿದು ಮನೆಯ 3 ಮಂದಿಗೂ ‘ಪಾಸಿಟಿವ್ ‘ಎಂದು ಬಂತು. (ಇದು ಯಾಕೆ antigen ಟೆಸ್ಟ್ ಮತ್ತು RT-PCR ನಲ್ಲಿ ವ್ಯತಿರಿಕ್ತ ಫಲಿತಾಂಶ? ನನ್ನದು ಅಂತಲ್ಲ ಹೆಚ್ಚಿನವರಿಗೆ)ಆದರೂ ಅದಕ್ಕೆ ಏನೂ ಭಯವಾಗಲಿಲ್ಲ.

ಅದರ ಮುಂದಿನ ಬೆಳವಣಿಗೆ ತೀರಾ ಕೆಟ್ಟದ್ದು. 17ರ ಸಂಜೆ ಬೆಂಗಳೂರಿನಿಂದ ನನ್ನ ಒಂದೇ ಮೊಬೈಲ್ಗೆ 3 ಕರೆಗಳು. ಮನೆಯವರ 3 ಜನರ ಹೆಸರು ಕೇಳಿ ಹೇಗಿದ್ದಾರೆ? ಸಮಸ್ಯೆ ಬಂದರೆ ಆಂಬುಲೆನ್ಸ್ ಗೆ ಕರೆ ಮಾಡಿ, ನೀವು ಮನೆಯಲ್ಲಿ ಪ್ರತ್ಯೇಕವಾಗಿರಿ ಹೀಗೆ. ಅಲ್ಲಿಂದ ಶುರುವಾಯಿತು ನಡುಕ. ನಾನೇ ಪ್ರಾಮಾಣಿಕವಾಗಿ ನಮ್ಮ ಏರಿಯಾದ ಶುಶ್ರೂಷಕಿಯವರಿಗೆ ವಿಷಯ ತಿಳಿಸಿದೆ. ಅವರು ಮನೆಯ ಹತ್ತಿರದ ಎಲ್ಲಾ ಮನೆಯವರಿಗೆ ತಿಳಿಸುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡಿದ್ದರಿಂದ ಆಗಸ್ಟ್ 18ರ ಬೆಳಿಗ್ಗೆಯಿಂದಲೇ, ದಿನ ಮುಖತಃ ಮಾತನಾಡುವ ನಮ್ಮ ಆತ್ಮೀಯ ನೆರೆಯವರೆಲ್ಲರೂ ತುಂಬಾ ದೂರವಾಗಿಬಿಟ್ಟರು. ಕೆಲವು ಮನೆಯವರು ದೂರವಾಣಿ ಕರೆ ಮಾಡಿ ಏನಾದರೂ ಬೇಕಿದ್ದರೆ ಹೇಳಿ ಎಂದು ಯಾವತ್ತೂ ಇಲ್ಲದ ಅನುಕಂಪ ತೋರಿದರು. ಅವರಿಗೆ ನಾನು ಖಂಡಿತ ಕ್ರತಜ್ಞ. 18ರ ಬೆಳಿಗ್ಗೆ ನಮ್ಮ ಏರಿಯಾದ ಆಶಾ ಕಾರ್ಯಕರ್ತೆ ಬಂದು ಪ್ರತ್ಯೇಕವಾಗಿ ಇರುವ ಬಗ್ಗೆ ಒಂದು ಅರ್ಜಿ ನಮೂನೆಯಲ್ಲಿ ಸಹಿ ಪಡೆದು ಮನೆಯ 3 ಪಾಸಿಟಿವ್ ದಾರರಿಗೂ ಔಷದಿಯ 3 ಪೊಟ್ಟಣ ನೀಡಿದರು. ಅದರಲ್ಲಿ 4 ದಿನಕ್ಕಾಗುವ ಪ್ಯಾರಸಿಟಮೋಲ್ , ವಿಟಮಿನ್ ಸಿ ಮಾತ್ರೆಗಳಿದ್ದವು. ಆ ಬಳಿಕ ಆಶಾ ಕಾರ್ಯಕರ್ತೆ ಮುಂದಿನ ಎರಡು ದಿನ ಭೇಟಿ ನೀಡಿದ್ದರು.

ಆಗಸ್ಟ್ 19ರಂದು ಬೆಳಿಗ್ಗೆ ಪಟ್ಟಣ ಪಂಚಾಯತ್ನಿಂದ ಕರೆ ಬಂತು, ನಿಮ್ಮ ಮನೆಯಲ್ಲಿ 3 ಜನ ಪಾಸಿಟಿವ್ ಇದೆ ಆದ್ದರಿಂದ ಭೇಟಿ ನೀಡುವುದಕ್ಕಿದೆ ಎಂದು 4 ಸಿಬ್ಬಂದಿಗಳು ಬಂದೇ ಬಿಟ್ಟರು. ಅವರ ಮಾತುಗಳು ಆದೇಶವನ್ನೇ ಹೊತ್ತು ತಂದಿತ್ತೆ ಹೊರತು ಸಾಂತ್ವಾನವೇ ಇರಲಿಲ್ಲ. ಹಾಗೆ ಹೀಗೆ ಎಂದು ಸರಕಾರದ ಕಾನೂನುಗಳನ್ನು ಹೇಳಿ ಮನೆಯ ಗೋಡೆಗೊಂದು ಪ್ರತ್ಯೇಕತಾ ಸ್ಟಿಕರ್ ಹಾಗೂ ಡೇಂಜರ್ ಟೇಪ್ ಹಾಕಿ ನಮ್ಮ ಮನೆಯನ್ನು ‘ಡೇಂಜರಸ್ ಜೋನ್’ ಮಾಡಿ, ಯಾವಾಗ ತೆಗೀಬೇಕು ಎಂದು ಹೇಳುತ್ತೇವೆ ಎಂದು ಆದೇಶ ಕೊಟ್ಟು ಹೋದರು. ಆ ದಿನದಿಂದ ರಸ್ತೆ ಬದಿಯಲ್ಲಿ ಹೋಗುವ ಪ್ರತಿ ವ್ಯಕ್ತಿಗಳು ನಮ್ಮ ಕನಸಿನ ಮನೆಯನ್ನು ನೋಡಿ ಮಾತನಾಡುವ ರೀತಿ, ನಿಂತು ನೋಡುವ ಭಂಗಿ, ಕೆಲವರು ದ್ರಿಷ್ಟಿ ಹಾಯಿಸದೆ ನಡೆಯುವ ಶೀಘ್ರ ನಡೆ, ಹಿಂದೆಂದೂ ಕಾಣದ ಮಾಸ್ಕ್ ಪೂರ್ತಿ ಮುಖವನ್ನು ಮುಚ್ಚುವ ಬಗೆ, ನನ್ನ ಪುಟ್ಟ ಮಗುವಿನ ಹಾಯ್ – ಬಾಯ್ಗೂ ಸ್ಪಂದಿಸದ ಹೃದಯವಂತಿಕೆಯ ನಿಜಬಣ್ಣ ನನ್ನ ಕಿಟಿಕಿಯ ಸ್ಕ್ರೀನ್ ಎಡೆಯಿಂದ ಕಂಡಾಗ ಅನುಭವಿಸಿದ ಮಾನಸಿಕ ಹಿಂಸೆ ಶತ್ರುವಿಗೂ ಬರಬಾರದು. ನಮ್ಮ ಮನೆಯ ನೆರೆಹೊರೆಯ ಕೆಲವರು ಶ್ವಾಸ ಬಿಗಿ ಮಾಡಿ ಆಚೆ ನೋಡುತ್ತಾ ಸಾಗುವ ರೀತಿ ಕಾಬೂಲ್ ಗಡಿಯ ಜೀವನಶೈಲಿಯನ್ನು ಓದಿದ ನೆನಪು ಮಾಡಿತು. ಕೆಲವರಂತೂ ಏನಾಗುದಿಲ್ಲ ಎಂದು ಧೈರ್ಯ ಹೇಳಿ ದಿನ ಕ್ಷೇಮ ವಿಚಾರಿಸುತಿದ್ದವರೂ ಇದ್ದಾರೆ ಖಂಡಿತ ಅವರಿಗೊಂದು ಹ್ಯಾಟ್ಸಪ್. ಪಾಸಿಟಿವ್ ಬಂದು ಒಂದು ದಿನ ಬಿಡದೆ ನಮ್ಮನ್ನು ವಿಚಾರಿಸುತಿದ್ದದ್ದು ಒಂದೇ, ಅದು 11ಗಂಟೆಗೆ ಬರುತಿದ್ದ ಫೋನ್ feedback. ಅದೂ ಒಂದು ದಿನ ರಿಪ್ಲೈ ಮಾಡ್ದಿದ್ದುದಕ್ಕೆ ಡಿಸ್ಚಾರ್ಜ್ ಸರ್ಟಿಫಿಕೇಟ್ ನೀಡಲಾಗುದಿಲ್ಲವೆಂದು ಸಂದೇಶ ಕಳಿಸಿತ್ತು. ನನ್ನ 7 ದಿನದ ಟೆಸ್ಟ್ ಕೂಡ ನೆಗೆಟಿವ್ ಬಂದು ಹೋಂ ಕ್ವಾರಂಟೈನ್ ತೆರವು ಮಾಡಿದ್ದಾಯ್ತು.

ಇಂದಿಗೆ ನಮ್ಮ ಮನೆಯ 17ದಿನದ ಹೋಂ ಕ್ವಾರಂಟೈನ್ ಮುಗಿದಿದೆ. ಆದರೆ ಕೆಲವು ಪ್ರಶ್ನೆಗಳು ಹಾಗೆ ಉಳಿದಿವೆ.
ಸ್ಟಿಕರ್ ಹಾಕಿ ಡೇಂಜರ್ ಜೋನ್ ಮಾಡಿಬಿಡುವ ಕೆಲಸ ಮಾತ್ರದಿಂದ, ತೀರಾ ಬಡವರಾದರೆ ಅವರ ನಿತ್ಯ ಬೇಕು ಬೇಡಗಳ ವ್ಯವಸ್ಥೆ ಹೇಗೆ? ಯಾರು ಮಾಡಬೇಕು? ಕ್ಷೇಮ ವಿಚಾರಿಸುವ ಮಾನವೀಯತೆ ತೋರಬೇಕಾದ್ದು ಯಾರು?
17 ದಿನದಲ್ಲಿ ಕನಿಷ್ಠ ಆಹಾರವಾದರೂ ಇದೆಯೇ? ಅವರ 17 ದಿನದ ವ್ಯವಹಾರ ಹೇಗೆ? ಬೇಡ ಕನಿಷ್ಠ ಒಂದು ವಿಚಾರಣೆ?
ಇರಲಿ ನನ್ನಂತಹ ಸಾಮಾನ್ಯರು ಏನಾದರೂ ವ್ಯವಸ್ಥೆ ಮಾಡಿಕೊಂಡಾರು… ಒಂದು ವೇಳೆ ತೀರಾ ಬಡವರಾದರೆ ಅವರ 17ದಿನದ ಬದುಕು ಹೇಗೆ?
“ನೀವು ಪ್ರಾಮಾಣಿಕ ರಾದರೆ ಮಾತ್ರ ಈ ಹಿಂಸೆಗಳು, ಅಲ್ಲವಾಗಿಸಿ ನಡೆದರೆ ನಿಮಗಾವುದೂ ಇಲ್ಲ” ಎಂದು ಅಲ್ಲೂ ಇಲ್ಲೂ ಜನ ಮಾತಾಡುವ ರೀತಿ ಕೇಳಿ ಆಶ್ಚರ್ಯ ವಾಯಿತು. ಹಾಗೆ ಅಲ್ಲಗಳೆದು ನಡೆದುಕೊಳ್ಳುವುದಾದರೆ, ಸರಕಾರದ ಕೊರೊನಾದ ವಿರುದ್ಧ ಹೋರಾಟ, ವಾರಾಂತ್ಯದ ಕರ್ಫ್ಯೂ, 2 ವರ್ಷಗಳಿಂದ ತೆರೆದುಕೊಳ್ಳದ ಶಾಲೆಗಳು ಇವೆಲ್ಲ ಯಾಕೆ ಎನ್ನುವ ಕಾತರದ ಪ್ರಶ್ನೆಗಳು? ಕೊನೆಗೂ ಸಂಶಯ ನನಗೆ ಕೊರೋನ ಕಾಯಿಲೆ ಸಾಮಾನ್ಯವೋ? ಭೀಕರವೋ?
ಒಂದಂತೂ ಸತ್ಯ ಈ ಎಲ್ಲಾ ಸಂಧರ್ಭಗಳು ನಮ್ಮ ಬಂದು ಬಳಗದ, ನೆರೆಹೊರೆಯ ಬಾಂಧವ್ಯಗಳ ನೈಜ ಬಣ್ಣ ಬಯಲಾದದ್ದು. ಈ ಲೇಖನ ನನ್ನ ಸಮಾಧಾನಕ್ಕೆ. ಹಿತವಾದರೆ ಓದಿಕೊಳ್ಳಿ. ಸರಿ ಮಾಡಿಕೊಳ್ಳುವ ಅವಕಾಶ ಬಂದಾಗ ಮಾಡಿಕೊಳ್ಳಿ ಅಷ್ಟೇ ವಿನಂತಿ.

- Advertisment -

Most Popular