Home ನಿಮ್ಮ ಅಂಕಣ ಆಝಾದಿ ಸಂಗ್ರಾಮ ದಿನ ಆಚರಣೆಗೆ ಮುಂದಾದ ಜನರು!

ಆಝಾದಿ ಸಂಗ್ರಾಮ ದಿನ ಆಚರಣೆಗೆ ಮುಂದಾದ ಜನರು!

ಲೇಖನ: ಕೊಡಂಗಾಯಿ ಕಾಮಿಲ್ ಸಖಾಫಿ
ಭಾರತದ ಪ್ರಜೆಗಳು ರಾಷ್ಟ್ರ ಧ್ವಜಾರೋಹಣದ ಸಿದ್ಧತೆಯಲ್ಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷ ಪೂರ್ತಿಯಾಗಲು ಬಾಕಿ ಉಳಿದಿರುವುದು ಇನ್ನೊಂದು ವರ್ಷ ಮಾತ್ರವಾಗಿದೆ. ಆದುದರಿಂದಲೇ ಸರಕಾರವು ಅಮೃತ ಮಹೋತ್ಸವ ಆಚರಣೆಗೆ ಹೆಜ್ಜೆಯಿಟ್ಟಿದೆ. ಕರ್ಫ್ಯೂ ಜಾರಿ ಮತ್ತು ಲಾಕ್ ಡೌನ್ ಹೇರಿದ ಕಾರಣ ಈ ವರ್ಷ ಕೂಡ ನೆಮ್ಮದಿಯ ಸ್ವಾತಂತ್ರ್ಯ ಆಚರಣೆಯಿಂದ ಜನರು ವಂಚಿತರಾಗುತ್ತಿರುವುದು ಬೇಸರವನ್ನುಂಟು ಮಾಡಿದೆ.
ಬಿಳಿಯರ ಬಿಗಿ ಹಿಡಿತದಿಂದ ಬಿಡುಗಡೆ ಗೊಳಿಸಿ ಭಾರತವನ್ನು ಬಚಾವ್ ಮಾಡಿದ ಸವಿ ನೆನಪಿನಲ್ಲಿ ತ್ರಿವರ್ಣ ಪಾತಕಿಯು ಕಳೆದ ಎಪ್ಪತ್ತನಾಲ್ಕು ವರ್ಷಗಳಿಂದ ಬಾನಿನಲ್ಲಿ ಹಾರಾಡುತ್ತಿದೆ.

- Advertisement -

ಸೌಹಾರ್ದತೆಯ ಅತ್ಯಂತ ದೊಡ್ಡ ಉದಾಹರಣೆಯಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿದ್ದ ನಮ್ಮ ದೇಶವಿಂದು ಮತ್ತೊಮ್ಮೆ ಸ್ವಾತಂತ್ರ್ಯದಿಂದ ವಂಚಿತವಾಗಿ ನಡುಗುತ್ತಿದೆ. ಅಂದು ಹೊರಗಿನವರು ಕಿವಿ ಹಿಂಡಿದ್ದರೆ ಇಂದು ದೇಶದೊಳಗಿರುವ ಒಂದು ಭಾಗವೇ ಅಧಿಕಾರಶಾಹಿಯ ಆಡಳಿತ ನಡೆಸುತ್ತಿದೆ. ಆದುದರಿಂದಲೇ ಪ್ರಜೆಗಳ ಮನಗಳಿಂದ ಉತ್ಸಾಹಗಳು ಇಳಿದು ಹೊರಟು ಹೋಗಿದೆ. ಆತಂಕದಿಂದಲೇ ದಿನದೂಡುತ್ತಿರುವ ಇಲ್ಲಿನ ಜನ ಸಾಮಾನ್ಯರು, ಸ್ವಾತಂತ್ರ್ಯದ ಸವಿಯಿಂದ ವಂಚಿತರಾಗುತ್ತಿದ್ದಾರೆ.

- Advertisement -

ಅಮೃತ ಮಹೋತ್ಸವದ ಅಂಗಳದಲ್ಲಿರುವ ಭಾರತವು ಹಸಿವು, ನಿರುದ್ಯೋಗ, ಜಾರಿಗೆ ತರುವ ವಿವಿಧ ನೀತಿಗಳ ಕಾರಣ ಸೃಷ್ಟಿಯಾಗುವ ಸಮಸ್ಯೆಗಳಿಂದ ಮೃತದೆಡೆಗೆ ಧಾವಿಸುತ್ತಿದೆ. ಪದೇಪದೇ ಘೋಷಣೆಯಾಗುತ್ತಿರುವ ಲಾಕ್ ಡೌನ್‌ಗಳು ಜನರ ಬದುಕನ್ನು ಹಂತಹಂತವಾಗಿ ಕಸಿಯುತ್ತಿದೆ. ದೇಶವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರದ ಅಗತ್ಯ ವಸ್ತುಗಳ ದೈನಂದಿನ ಬೆಲೆಯೇರಿಕೆಯು ಇಲ್ಲಿನ ಪ್ರಜೆಗಳನ್ನೇ ಸಾಲಗಾರರನ್ನಾಗಿಸಿದೆ.

- Advertisement -

ಆಗಾಗ್ಗೆ ಬಂದ್, ಹರತಾಳಗಳಿಗೆ ಕರೆ ಕೊಡುವುದರಿಂದ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಸುಲಭವಾದ ದಾರಿಗಳು ಸಿಗುತ್ತಿದೆ. ಈ ಹಿಂದೆ ಒಂದು ದಿನ ಬಂದಾದರೂ ದೇಶದ ಅಭಿವೃದ್ಧಿಗೆ ಅದು ತಡೆಯಾಗುತ್ತದೆ ಎಂದು ಬೊಬ್ಬಿಡುತ್ತಿದ್ದವರು, ಈಗ ತಿಂಗಳುಗಳ ಕಾಲ ಯದ್ವಾತದ್ವಾ ಬಂದು ಮಾಡಿ ಅದುವೇ ನಮ್ಮ ದೊಡ್ಡ ಸಾಧನೆಯಾಗಿದೆಯೆಂದು ತೋರಿಸಿ ಕೊಡುತ್ತಿರುವಾಗಲೂ ಮೌನವಾಗಿರುವುದು ವಿಪರ್ಯಾಸವಲ್ಲದೇ ಮತ್ತೇನು.!?
ದೇಶದ ರಕ್ಷಣೆಗಾಗಿ ಸರ್ವವನ್ನೂ ಸಮರ್ಪಿಸಿ ಹೋರಾಟ ನಡೆಸಿದ ಬಹುದೊಡ್ಡ ವಿಭಾಗವನ್ನೇ ದೇಶದ ಪ್ರಜೆಗಳ ಪಟ್ಟಿಯಿಂದ ಹೊರಹಾಕಿ ಅವರಿಗೆ ಸ್ವಾತಂತ್ರ್ಯವನ್ನು ನಿಷೇಧಿಸುವ ಪ್ರಯತ್ನವು ತೆರೆಮರೆಯಲ್ಲಿ ಸದ್ದಿಲ್ಲದೆ ನಡೆಯುತ್ತಿರುವುದು ಗೊತ್ತಾಗದವರು ಯಾರೂ ಇರಲಿಕ್ಕಿಲ್ಲ. ವಿಪರೀತ ತೆರಿಗೆಗಳ ಮೂಲಕ ಜನರು ಸಂಪಾದಿಸಿದ ಸಂಪತ್ತುಗಳನ್ನು ಕೊಳ್ಳೆ ಹೊಡೆಯುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ದುಡಿದು ತಿನ್ನುತ್ತಿರುವ ಕೈಗಳನ್ನು ಸಂಕೋಲೆಗಳಿಂದ ಕಟ್ಟಿ ಹಾಕಲಾಗುತ್ತಿದೆ. ಅನ್ಯಾಯದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲಾಗುತ್ತಿದೆ. ಶಿಕ್ಷಣಗಳು ವ್ಯಾಪಾರೀಕರಣವಾಗುತ್ತಿದೆ. ಪ್ರಕಾಶದಂತೆ ಜ್ವಲಿಸುತ್ತಾ ಲೋಕದ ಗಮನವನ್ನು ತನ್ನೆಡೆಗೆ ಸೆಳೆದಿದ್ದ ಭಾರತ ರಾಷ್ಟ್ರವು ಜ್ವಲಂತ ಸಮಸ್ಯೆಗಳಿಗೆ ಸಿಲುಕಿ ರಕ್ಷಣೆಗಾಗಿ ಕಾಯುತ್ತಿದೆ. ಜನರಿಗೆ ಸಂದೇಶಗಳನ್ನು ತಲುಪಿಸಬೇಕಾದ ಮಾಧ್ಯಮಗಳು ಸತ್ಯಕ್ಕೆ ಪರದೆಯನ್ನು ಕಟ್ಟಿ ಆಡಳಿತಗಾರರ ಕೈಗೊಂಬೆಯಾಗಿರುವುದನ್ನು ತಳ್ಳಿಹಾಕುವಂತಿಲ್ಲ.
ಜನರ ಮೌನ ಮತ್ತು ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿ, ಆಕ್ರೋಶ ಮತ್ತು ಭಾವನೆಗಳಿಗೆ ಬೆಲೆ ನೀಡದೆ ಇನ್ನೂ ಮೈಮರೆತು ಬದುಕುವುದು ಸರಿಯಲ್ಲ. ದೇಶದ್ರೋಹದ ಹೆಸರೇಳಿ ಆಡಳಿತ ವಿರುದ್ಧ ಮಾತನಾಡುವುದರಿಂದ ಜನರ ಬಾಯಿಯನ್ನು ಮುಚ್ಚಿಸುವುದು ಹೆಚ್ಚು ಕಾಲ ನಡೆಯಲ್ಲ. ತಾಳ್ಮೆಗೂ ಒಂದು ಮಿತಿಯಿದೆ. ಅದು ಸ್ಪೋಟಗೊಂಡರೆ ಅಧಿಕಾರ ಕೂಡ ಸುಟ್ಟು ಹೋಗಬಹುದು. ಇದನ್ನೆಲ್ಲಾ ಅರಿತು, ಗಮನಿಸಿ ಮುಂದಿನ ಅವಧಿಯನ್ನಾದರೂ ಸುಂದರವಾಗಿಸಿ ಜನರಿಗೆ ಉಪಕಾರ ಸಿಗುವಂತೆ ಮಾಡಲು ಪ್ರಯತ್ನಿಸಿದರೆ ದೇಶಕ್ಕೆ ಒಳ್ಳೆಯದು. ಆಡಳಿತ ವಿಭಾಗಕ್ಕೆ ಕೂಡ..!
ಜೈ ಭಾರತ್.
ಸರ್ವರಿಗೂ ಸ್ವಾತಂತ್ರ್ಯ ಸಂಭ್ರಮದ ಸಂತೋಷಗಳು

- Advertisment -

Most Popular