Home ನಮ್ಮ ಕರಾವಳಿ ಕೇರಳ ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ: ಒಟ್ಟು 21 ಮಂದಿ ಸಾವು, ಹಲವರು ನಾಪತ್ತೆ

ಕೇರಳ ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ: ಒಟ್ಟು 21 ಮಂದಿ ಸಾವು, ಹಲವರು ನಾಪತ್ತೆ

ತಿರುವನಂತಪುರಂ: ಕೇರಳದ ದಕ್ಷಿಣ ಮತ್ತು ಕೇಂದ್ರ ಭಾಗದ ಬಹುತೇಕ ಪ್ರದೇಶಗಳು ಪ್ರಕೃತಿ ವಿಕೋಪದಿಂದ ತತ್ತರಿಸಿದೆ. ಭಾರಿ ಮಳೆ ಮತ್ತು ಭೂಕುಸಿತದಿಂದ 21 ಜನರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

- Advertisement -

ನೀರಿನ ಪ್ರವಾಹದ ಅಪಾಯದಲ್ಲಿ ಸಿಲುಕಿರುವವರ ರಕ್ಷಣೆ ಮತ್ತು ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪಟ್ಟಣಂತಿಟ್ಟ, ಕೋಟಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿರ್ಶೂ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಭಾರಿ ಮಳೆ ಸುರಿಯುತ್ತಿರುವ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡು, ಮಲಪ್ಪುರಂ, ಕೋಯಿಕೋಡ್ ಮತ್ತು ವಯನಾಡು ಜಿಲ್ಲೆಗಳಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಸಂಬಂಧ ತುರ್ತು ಸಭೆ ನಡೆಸಿದ ಬಳಿಕ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ಜನರ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದ್ದೇವೆ. ಸೇನೆ, ವಾಯುಪಡೆ ಮತ್ತು ನೌಕಾದಳದ ನೆರವು ಕೋರಿದ್ದೇವೆ. ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

ಪಟ್ಟಣಂತಿಟ್ಟ, ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದೆ. ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ರಕ್ಷಿಸುವಂತೆ ಹಾಗೂ ಪ್ರವಾಹ ಮತ್ತು ಭೂಕುಸಿತ ಸಂಭವಿಸಬಹುದಾದ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

- Advertisement -
- Advertisment -

Most Popular